Pages

ನವೆಂ 15, 2011

ಬರಿದಾದ ಕನಸು

ನನ್ನೊಳಗಿನಾ ಕನಸು ಕುಸಿದು ಬೀಳುವ ಮುನ್ನ....
ಒಮ್ಮೆ ನುಂಗಿಬಿಡು ನನ್ನೊಳಗಿನಾ ನೋವುಗಳನ್ನಾ..
ಹಿಡಿದು ಹುದುಗಿಸಿಟ್ಟ ಮನದ ನಲಿವುಗಳನ್ನ..
ಬಿರಿದು ಬರಿದಾದ ಕಸ್ಟ ಕೋಟಲೆಗಳನ್ನಾ...

ಮನದ ಮೂಲೆಯಲ್ಲಿ ಅಡಗಿಸಿಟ್ಟ ನೆನಪುಗಳನ್ನ..
ಹೆಣೆದು ಪೋಣಿಸಿಟ್ಟ ಮುತ್ತಿನಾ ಮಣಿಗಳನ್ನಾ..
ಕಪ್ಪೆ ಚಿಪ್ಪಿನೊಳಗೇ ಕೊಳೆತು ನಾರುವ ಮುನ್ನ..
ಹೆಕ್ಕಿ ತೆಗೆದು ಬಿಡು ಮನದ ಮಾತುಗಳನ್ನಾ..

ಮಾತು ಮೌನವಾಗಿ, ಮೌನ ಮೂಕವಾಗುವ ಮುನ್ನ.
ಮನಸು ಒಡೆದ ಕನ್ನಡಿಯ ಚೂರುಗಳಾಗುವ ಮುನ್ನಾ.. 
ಪ್ರತಿಬಿಂಬ ನನ್ನೆದೆಯ ನೆನಪ ಹಿಪ್ಪೆ ಮಾಡುವ ಮುನ್ನ..
ಮುಕ್ತವಾಗಿಸು ಮೂಕವಾಗುವ ಅವಕಾಶವನ್ನಾ...! .

ಬೇಡುವವರು.

ಬೇಡುವವರು ಇವರಿಲ್ಲಿ ನಾನಾ ತರದಲಿ...
ಬೇಡುವುದು ಮನುಜನ ಕರ್ಮ ಜನ್ಮದಲಿ..
ಅದಿಹುದು ನಾನಾ ವಿಧದ ಹೆಸರುಗಳಲಿ...
ಬೇಡದವರ್ಯಾರಿಹರು ಈ ಜಗದಲೀ... ?

ಹಣ,ಊಟ ಬೇಡುವರು ತಿರುಕನೆನುತಲಿ..
ಎಲ್ಲಾ ಇದ್ದವರು ಬೇಡುವರು ದೇವರಲಿ...
ಸಾಧು ಸಂತರು ಬೇಡುವರು ಬಹುಜನರಲಿ..
ಬೇಡದವರ್ಯಾರಿಹರು ಈ ಜಗದಲೀ....?

ವರ ಬೇಕೆಂದು ಬೇಡುವರು ಮಾತಾಪಿತರಲಿ..
ವಧು ಬೇಕೆಂದು ಬೇಡುವರು ವರಾನ್ವೇಷಣೆಯಲಿ..
ಬೇಕು ಬೇಡಗಳ ಲೆಕ್ಕಾಚಾರ ಮನಸುಗಳಲಿ..
ಬೇಡದವರ್ಯಾರಿಹರು ಈ ಜಗದಲೀ..?

ಎಲ್ಲಾ ಇಹುದೆಂದು ಬಾಳುವರು ಹಮ್ಮಿನಲಿ..
ಬೀಗುವರು ತನ್ನದೆನ್ನುವ ಬಿಗುಮಾನದಲಿ...
ಎಲ್ಲವೂ ದೊರಕಿಹುದು ಬರೀ ಬಿಕ್ಷೆಯಲಿ...
ಬೇಡದವರ್ಯಾರಿಹರು ಈ ಜಗದಲೀ..?

ಬೇಕು ಬೇಕೆನ್ನುವಾ ಅನುದಿನದ ಚಿಂತೆಯಲಿ..
ಬೇಯುವರು ಎಲ್ಲರೂ ಒಂದಿನಾ ಚಿತೆಯಲಿ..
ಎಲ್ಲಾ ಬಿಕ್ಷುಕರೇ ನಡುವಿನಾ ಶೂನ್ಯದಲಿ...
ಬೇಡದವರ್ಯಾರಿಹರು ಈ ಜಗದಲೀ..?

ಜಗವು ತುಂಬಿಹುದು ಆಸರೆಯ ಬೆಳಕಿನಲಿ..
ಹುಲುಮಾನವ ಬದುಕಿಹನು ತನ್ನ ಪರಿಧಿಯಲಿ..
ಪರಿವೆಯಿಲ್ಲದೆ ಸಾಗಿದೇ ಕಾಲದೋಕುಳಿಯಲಿ..
ಬೇಡದವರ್ಯಾರಿಹರು ಈ ಜಗದಲೀ...?