Pages

ಫೆಬ್ರವರಿ 21, 2012

ಮನ್ವಂತರ..

ಧೋ...ಎಂದು ಸುರಿಯುತ್ತಿದ್ದ ಮಳೆ.....ಅದರ ಶಬ್ದಕ್ಕೆ ಕಿವಿಗೊಡಲು ಒಪ್ಪದ ಮನವನ್ನು ತಹಬದಿಗೆ ತರುವಲ್ಲಿ ವಿಫಲವಾದರೂ.....ಮನಸ್ಸು ಓಡುವ ದಿಕ್ಕಿನತ್ತ ನಡೆಯತೊಡಗಿದೆ. ನಾನು ,ನಾನಾಗಿರಲಿಲ್ಲ.....ಬಹುದೂರ ನೆಡೆದೆ.. ನಡೆದೆ.. ಸಮುದ್ರದಲ್ಲಿ ತೇಲುವ ನೌಕೆಯಂತೆ ಮನ ತೊಳಲಾಟದಲ್ಲಿ ಹೊಯ್ದಾಡುತಿತ್ತು...ಅದರಾಳದಲ್ಲೇ ತಲ್ಲೀನಳಾದೆ......ಮನಕ್ಕೆ ತಂಪೆರೆವ ಅನುಭೂತಿ....ಅದರ ಬೆನ್ನಲ್ಲೆ ಸಾಗಿದೆ....ಅದ್ಭುತವಾದ, ವರ್ಣಿಸಲು ಅತೀತವಾದಂತಹ, ಮನಕ್ಕೆ ಮುದವೆನಿಸುವ ಗಾಢವಾದ ಪ್ರೀತಿಯ ಸಿಂಚನ...! ಮೃದುವಾದ ಕೈಗಳಿಂದ ಸವರಿದೆ....ಅಲ್ಲಿಯವರೆಗೆ ನನಗೆ ಅಂತಹ ಒಂದು ಅನುಭೂತಿ ಅರಿವಾಗಿರಲೇ ಇಲ್ಲ...ಲೋಕದಲ್ಲಿ ಸೃಸ್ಟಿಯ ವಿಚಿತ್ರ ಇಸ್ಟು ಅದ್ಭುತವೆಂದು ಅನಿಸಿರಲೇ ಇಲ್ಲ....ನೋಡುತ್ತಲೇ ಇದ್ದೆ...ಸಂತಸದ ಕ್ಷಣಗಳೊಂದಿಗೆ......ಹರಿದ ಕಣ್ಣೀರ ಧಾರೆ...ಪನ್ನೀರಿನೊಂದಿಗೆ...! ವಿಷಾದದ ಕಣ್ಣೀರು ಸೇರಿ ವಿಜೃಂಭಿಸಿತ್ತು......ವಿಧಿ ಹಣೆಬರಹವನ್ನು ಬರೆದಾಗಿತ್ತು...ನನಗದರ ಪರಿವೇ ಇರಲಿಲ್ಲ...ಪುಟ್ಟ ಹೃದಯದಲ್ಲಿ ಬೆಚ್ಚಗಿನ ಅನುಭವಗಳ  ಸರಮಾಲೆ....ಅದರೊಂದಿಗೆ ಅವರ್ಣನೀಯ ಸಂತಸದ ಪುಟ ಪುಟಗಳ ಪದರದೊಳಗೆ, ನನ್ನ ಬರಿದಾದ  ಮನಸ್ಸಿನ ನಿಗೂಢ ಅರಿವಾಗುವುದಾದರೂ ಹೇಗೆ..? ನೋವಿನ ನಗೆ ಚೆಲ್ಲಿ ಉದಾರತೆ ಮೆರೆದದ್ದಸ್ಟೆ...ಜಗತ್ತಿನಲ್ಲಿ ಸಂತಸಕ್ಕೆ ಹಿಗ್ಗದವರ್ಯಾರು..? ಆದರೆ ಅದರ ಬೆನ್ನಲ್ಲೇ ಇರುವ ಚೂರಿಯ ಇರಿತ ಅರಿವಾಗಲೇ ಇಲ್ಲ....ಕತ್ತಲೆಯ ನಂತರ ಬೆಳಕಿರುವುದು ಎಸ್ಟು ಸತ್ಯವೋ ಅಸ್ಟೇ ಸತ್ಯ..ನನ್ನ ಸಂತಸದಲ್ಲಿ ವಿಷಾದದ ಛಾಯೆ...ಪ್ರೀತಿಯ ಮಧುರ ಸಿಂಚನದೊಂದಿಗೆ, .....ಎಂದಿಗೂ ಮಾಯದ ಗಾಯದೊಡನೆ .... ಬದುಕಿನಾ ಅರ್ಥವನು ಹುಡುಕಾಡುತ್ತಿರುವೆ....ಹುಡುಕಾಡುವುದೇ ಬದುಕು ಅಲ್ಲವೇ....? ಬದುಕಿನಾ ಅರ್ಥವನು ತಿಳಿದವರಿಹರೇ...???    

ಬದುಕಿನಾ ಬಲೆ.

ಬದುಕಿನಾ ಓಟದಲಿ ತಪ್ಪೆಲ್ಲಿ, ಸರಿಯೆಲ್ಲಿ....
ಒಂದಿನಿತು ಅರಿವಿಗೂ ಬಾರದಿಲ್ಲಿ...!

ಭ್ರಮೆಯ ಆವೇಗದಲಿ ಸಾಗುತಿದೆ ಬದುಕಿಲ್ಲಿ..
ಎಲ್ಲ ಅವನಿಚ್ಛೆಯಾ ಸೂತ್ರದಾರಿಗಳಿಲ್ಲಿ..... !

ನಾವು ನಮ್ಮವರೆಂಬ ಕಲ್ಪನೆಯ ಪರಿಧಿಯಲಿ..
ಎಲ್ಲವೂ ಸುಂದರ, ಸೊಗಸಿಹುದು ಇಲ್ಲಿ...!

ಕಲ್ಪನೆಯ ಪರಧೆ ಸರಿದಾಗ ತಿಳಿಯುವುದಿಲ್ಲಿ..
ಎಲ್ಲ ಬರೀ ನಾಟಕದ ಪಾತ್ರಧಾರಿಗಳಿಲ್ಲಿ...!

ನಾನು ಎನ್ನುವ ತೆರೆಯ ಕಳಚಿ ಬದುಕಬೇಕಿಲ್ಲಿ..
ಬದುಕೆಲ್ಲಾ ಶೂನ್ಯ ಅಂತರಾಳದಲ್ಲಿ...!

ಬದುಕಿನಾ ಕಲೆಯ ಅರಿಯಬೇಕಿಲ್ಲಿ...
ಎಲ್ಲವೂ ನಿ:ಶ್ಯಬ್ಧ ಮೌನದಲ್ಲಿ....!!

ನವೆಂ 15, 2011

ಬರಿದಾದ ಕನಸು

ನನ್ನೊಳಗಿನಾ ಕನಸು ಕುಸಿದು ಬೀಳುವ ಮುನ್ನ....
ಒಮ್ಮೆ ನುಂಗಿಬಿಡು ನನ್ನೊಳಗಿನಾ ನೋವುಗಳನ್ನಾ..
ಹಿಡಿದು ಹುದುಗಿಸಿಟ್ಟ ಮನದ ನಲಿವುಗಳನ್ನ..
ಬಿರಿದು ಬರಿದಾದ ಕಸ್ಟ ಕೋಟಲೆಗಳನ್ನಾ...

ಮನದ ಮೂಲೆಯಲ್ಲಿ ಅಡಗಿಸಿಟ್ಟ ನೆನಪುಗಳನ್ನ..
ಹೆಣೆದು ಪೋಣಿಸಿಟ್ಟ ಮುತ್ತಿನಾ ಮಣಿಗಳನ್ನಾ..
ಕಪ್ಪೆ ಚಿಪ್ಪಿನೊಳಗೇ ಕೊಳೆತು ನಾರುವ ಮುನ್ನ..
ಹೆಕ್ಕಿ ತೆಗೆದು ಬಿಡು ಮನದ ಮಾತುಗಳನ್ನಾ..

ಮಾತು ಮೌನವಾಗಿ, ಮೌನ ಮೂಕವಾಗುವ ಮುನ್ನ.
ಮನಸು ಒಡೆದ ಕನ್ನಡಿಯ ಚೂರುಗಳಾಗುವ ಮುನ್ನಾ.. 
ಪ್ರತಿಬಿಂಬ ನನ್ನೆದೆಯ ನೆನಪ ಹಿಪ್ಪೆ ಮಾಡುವ ಮುನ್ನ..
ಮುಕ್ತವಾಗಿಸು ಮೂಕವಾಗುವ ಅವಕಾಶವನ್ನಾ...! .

ಬೇಡುವವರು.

ಬೇಡುವವರು ಇವರಿಲ್ಲಿ ನಾನಾ ತರದಲಿ...
ಬೇಡುವುದು ಮನುಜನ ಕರ್ಮ ಜನ್ಮದಲಿ..
ಅದಿಹುದು ನಾನಾ ವಿಧದ ಹೆಸರುಗಳಲಿ...
ಬೇಡದವರ್ಯಾರಿಹರು ಈ ಜಗದಲೀ... ?

ಹಣ,ಊಟ ಬೇಡುವರು ತಿರುಕನೆನುತಲಿ..
ಎಲ್ಲಾ ಇದ್ದವರು ಬೇಡುವರು ದೇವರಲಿ...
ಸಾಧು ಸಂತರು ಬೇಡುವರು ಬಹುಜನರಲಿ..
ಬೇಡದವರ್ಯಾರಿಹರು ಈ ಜಗದಲೀ....?

ವರ ಬೇಕೆಂದು ಬೇಡುವರು ಮಾತಾಪಿತರಲಿ..
ವಧು ಬೇಕೆಂದು ಬೇಡುವರು ವರಾನ್ವೇಷಣೆಯಲಿ..
ಬೇಕು ಬೇಡಗಳ ಲೆಕ್ಕಾಚಾರ ಮನಸುಗಳಲಿ..
ಬೇಡದವರ್ಯಾರಿಹರು ಈ ಜಗದಲೀ..?

ಎಲ್ಲಾ ಇಹುದೆಂದು ಬಾಳುವರು ಹಮ್ಮಿನಲಿ..
ಬೀಗುವರು ತನ್ನದೆನ್ನುವ ಬಿಗುಮಾನದಲಿ...
ಎಲ್ಲವೂ ದೊರಕಿಹುದು ಬರೀ ಬಿಕ್ಷೆಯಲಿ...
ಬೇಡದವರ್ಯಾರಿಹರು ಈ ಜಗದಲೀ..?

ಬೇಕು ಬೇಕೆನ್ನುವಾ ಅನುದಿನದ ಚಿಂತೆಯಲಿ..
ಬೇಯುವರು ಎಲ್ಲರೂ ಒಂದಿನಾ ಚಿತೆಯಲಿ..
ಎಲ್ಲಾ ಬಿಕ್ಷುಕರೇ ನಡುವಿನಾ ಶೂನ್ಯದಲಿ...
ಬೇಡದವರ್ಯಾರಿಹರು ಈ ಜಗದಲೀ..?

ಜಗವು ತುಂಬಿಹುದು ಆಸರೆಯ ಬೆಳಕಿನಲಿ..
ಹುಲುಮಾನವ ಬದುಕಿಹನು ತನ್ನ ಪರಿಧಿಯಲಿ..
ಪರಿವೆಯಿಲ್ಲದೆ ಸಾಗಿದೇ ಕಾಲದೋಕುಳಿಯಲಿ..
ಬೇಡದವರ್ಯಾರಿಹರು ಈ ಜಗದಲೀ...?